ಕೋಟಿ ಆದಾಯ ಬಿಟ್ಟು ರೈತನಾದ ಎಂಜಿನಿಯರ್
ಓದಿದ್ದು ಸಾಫ್ಟ್ ವೇರ್ ಎಂಜಿನಿಯರ್.ಅಮೆರಿಕದಲ್ಲಿ ಕೋಟಿ ಕೋಟಿ ಸಂಬಳ ಬಂದರೂ ಕೂಡ, ಆತನ ತವಕ ಬೇರೆಯೇ ಇತ್ತು. ಜೀವನದಲ್ಲಿ ಸಂತೋಷ ಬೇಕೆಂದರೆ ಹಣ ಮುಖ್ಯ ಎನ್ನುತ್ತಾರೆ.ಆದರೆ ಆತ ಹಣಕ್ಕಿಂತ ದೊಡ್ಡದು ಮತ್ತೊಂದು ಇದೆ. ಅದು ನನ್ನ ಮಣ್ಣಿನಲ್ಲಿದೆ ಎಂದು 30ರ ವಯಸ್ಸಿನಲ್ಲೇ ತನ್ನ ಪತ್ನಿಯ ಜೊತೆಗೆ 2014ರಲ್ಲಿ ತಾಯ್ತಾಡಿಗೆ ಮರಳಿ ಬಂದ ಆ ಕೋಟಿ ಒಡೆಯ.ವಿದೇಶದಲ್ಲಿ ಇಲ್ಲದ ಸಂತೋಷ ಅದು ನನ್ನೂರ ಕೃಷಿಯಲ್ಲಿದೆ ಎಂದು, ಸಾವಯವ ಕೃಷಿಯಲ್ಲಿ ಹೊಸದೊಂದು ಬದಲಾವಣೆಯನ್ನೇ ತಂದರು.ಅದು ಹೇಗೆಂದರೆ ಇಡೀ ದೇಶವೇ ತನ್ನೂರನ್ನು ತಿರುಗಿ ನೋಡುವಂತೆ. ಕೃಷಿಯ ಮೂಲಕ ಸಾಧಿಸಿ ತೋರಿಸಿದವರು ಆ ರೈತ ಮಧುಚಂದನ್.
ಮಧುಚಂದನ್ ಮಂಡ್ಯ ಜಿಲ್ಲೆಯ ಸೊನಗನಹಳ್ಳಿ ಗ್ರಾಮದ ಡಾ.ಚಿಕ್ಕದೇವಯ್ಯನವರ ಮಗ.ಎಂಜಿನಿಯರ್ ವ್ಯಾಸಂಗ ಮಾಡುತ್ತಲೇ ವಿಪ್ರೋದಂತಹ ಪ್ರತಿಷ್ಠಿತ ಕಂಪನಿಗಳಲ್ಲಿ ಕೆಲಸ ಮಾಡಿದರು. ತದಂನಂತರ ‘ವೆರಿಫಾಯಾ ಎನ್ನುವ ಕಾರ್ಪೋರೇಟ್ ಸಂಸ್ಥೆಯನ್ನು ಕಟ್ಟಿ 2005ರವರೆ ಬಹಳ ಯಶಸ್ವಿಯಾಗಿ ನಡೆಸಿಕೊಂಡು ಹೋದರು. ಈ ಸಂಸ್ಥೆಯ ಸಾಫ್ಟ್ವೇರ್ ಅನ್ನು ಇಡೀ ಪ್ರಪಂಚವೇ ಬಳಸುತ್ತಿದೆ. ತಮ್ಮವೃತ್ತಿ ಬದುಕಲ್ಲಿ ಲಂಡನ್, ಇಸ್ರೇಲ್, ನ್ಯೂಯಾರ್ಕ್,ಫಿಲಿಫೈನ್ಸ್ ಹೀಗೆ ವಿಶ್ವದ 25 ದೇಶಗಳ ನೂರಾರು ನಗರಗಳಲ್ಲಿ ಮಧುಚಂದನ್ ತಿರುಗಾಡಿದ್ದಾರೆ.ಸಾಫ್ಟ್ವೇರ್ ಕ್ಷೇತ್ರದಲ್ಲಿ ಒಂದು ಸಂಸ್ಥೆಯನ್ನು ಪ್ರಾರಂಭಿಸುವುದರ ಮೂಲಕ ದೊಡ್ಡ ಹೆಸರು ಮಾಡಿದ್ದಾರೆ.
ವಾರ್ಷಿಕ 1.5 ಕೋಟಿ ಆದಾಯ ಬರುತ್ತಿದ್ದರೂ ಕೂಡ, ಅವರ ಮನಸ್ಸು ಮಂಡ್ಯ ಜಿಲ್ಲೆಯಲ್ಲೆ ಇತ್ತು.ಹೀಗಾಗಿ ಕೋಟಿ ಆದಾಯವನ್ನು ಬಿಟ್ಟು ಕೃಷಿಯಲ್ಲಿ ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ.“ಆರ್ಗಾನಿಕ್ ಮಂಡ್ಯ” ಎಂಬ ಬಹು ದೊಡ್ಡ ಸಂಸ್ಥೆಯನ್ನು ಮಂಡ್ಯ ಜಿಲ್ಲೆಯಲ್ಲಿ ಕಟ್ಟುವುದರ ಮೂಲಕ ಅನ್ನದಾತರ ಧನಿಯಾಗಿ ಮತ್ತು ರೈತರ ಬೆನ್ನಲುಬಾಗಿ ನಿಂತಿದ್ದಾರೆ.
ಬರೋಬ್ಬರಿ 36 ಕೋಟಿ ವ್ಯವಹಾರದ ಗುರಿಯೇ ಈ “ಆರ್ಗಾನಿಕ್ ಮಂಡ್ಯ: ಸಾವಯವ ಕೃಷಿ ಮತ್ತು ರೈತರ ಆತ್ಮಹತ್ಯೆಯನ್ನು ತಡೆಗಟ್ಟುವುದೇ ಮಧುಚಂದನ್ ಅವರ ಧೈಯವಾಗಿತ್ತು. ಹೀಗಾಗಿ ಜಿಲ್ಲೆಗೆ ಬಂದ ಅವರು, ಮಂಡ್ಯ ರೈತರ ನಾಡಿಮಿಡಿತವನ್ನು ಅರಿಯಲು ಹಾಗೂ ಅವರ ಕಷ್ಟ ಕಾರ್ಪಣ್ಯವನ್ನು ತಿಳಿಯಲು ಖುದ್ದಾಗಿ ರೈತರ ಮನೆ ಬಾಗಿಲು ತಟ್ಟುತ್ತಾರೆ.
ರೈತರು ತಮ್ಮಕೃಷಿ ಪದ್ಧತಿಯಲ್ಲಿ ಬಳಸಿಕೊಳ್ಳುವ ಸ್ಥಳೀಯ ಬುದ್ದಿವಂತಿಕೆಯನ್ನ ಹೊಂದಿದ್ದಾರೆ.ಉತ್ತಮ ಫಸಲು ನೀಡಲು ಏನು ಬೇಕು ಎಂದು ಅವರಿಗೆ ತಿಳಿದಿದೆ. ಆದರೆ ಅವರು ಕೀಟನಾಶಕಗಳು ಮತ್ತು ರಾಸಾಯನಿಕಗಳನ್ನು ಬಳಸುವುದರಲ್ಲಿ ದಾರಿ ತಪ್ಪಿದ್ದಾರೆ. ಇದರಿಂದ ಮಣ್ಣಿನ ಗುಣಮಟ್ಟ ಮತ್ತು ಇಳುವರಿ ಕಮ್ಮಿಯಾಗುತ್ತಿದೆ ಎಂದು ಮಧುಚಂದನ್ ತಮ್ಮ ಅಧ್ಯನದ ಮೂಲಕ ಕಂಡುಕೊಳ್ಳುತ್ತಾರೆ.
ಜಿಲ್ಲೆಯ ರೈತರನ್ನು ಸಂಪೂರ್ಣವಾಗಿ ಅಧ್ಯಯನ ಮಾಡಿದ ನಂತರ ತಮ್ಮ ಸ್ನೇಹಿತರ ಜೊತೆಗೂಡಿ ಕಾರ್ಪೋರೇಟ್ ವ್ಯವಸಾಯ ಮಾಡಲು ಪ್ರಾರಂಭಿಸುತ್ತಾರೆ. ಆ ವಿಭಿನ್ನ ಬೇಸಾಯ ರೈತರ ಜೀವನದಲ್ಲಿ ಹೊಸದೊಂದು ಬೆಳಕನ್ನು ಮೂಡಿಸುತ್ತದೆ.ಅದುವೇ ‘ಸಾವಯವ ಬೇಸಾಯ.
ರೈತನು ಬೆಳೆದ ಕಬ್ಬಿಗೆ ಸರಿಯಾದ ಬೆಲೆ ಸಿಗದೆ ಆತ್ಮಹತ್ಯೆಯ ದಾರಿಯನ್ನು ತುಳಿದಿದ್ದರು.ಆದರೆ, ಮಧುಚಂದನ್ ರೈತರ ಕಬ್ಬಿಗೆ ಸರ್ಕಾರ ಕೊಡುವ ಬೆಲೆಗಿಂತ ಹೆಚ್ಚಿನ ಹಣವನ್ನು ಕೊಡಲು ಮುಂದಾಗಿ, ಆತನ ಬದುಕಿಗೆ ಆಸರೆಯಾದರು.ಆದರೆ ಆ ಕಬ್ಬು ವಯವ ಕಬ್ಬೆ ಆಗಿರಬೇಕೆಂಬುದು ಇವರ ನಿಯಮವಾಗಿತ್ತು. 200ರಿಂದ 300 ರೈತರನ್ನು ಒಗ್ಗೂಡಿಸಿಕೊಂಡು 2015ರಲ್ಲಿ “ಸಾವಯವ ಕೃಷಿಕರ ಸಹಕಾರ ಸಂಘ’ವನ್ನು ಆರಂಭಿಸಿದ್ದಾರೆ. ಅದರ ಮೂಲಕ ಕಬ್ಬು, ಭತ್ತ, ತೆಂಗು ಹಾಗೂ ತರಕಾರಿ ಬೆಳೆಗಳನ್ನು ಬೆಳೆಯಲು ಸಾವಯವ ಪದ್ಧತಿಯನ್ನು ಅಳವಡಿಸಿಕೊಳ್ಳುವಂತೆ ಜಾಗೃತಿ ಮೂಡಿಸುತ್ತಿದ್ದಾರೆ.
ಸಾವಯವ ಆಹಾರವನ್ನು ಸೇವಿಸುವುದರ ಮೂಲಕ ಮನುಷ್ಯನ ಆರೋಗ್ಯ ಚೆನ್ನಾಗಿರುತ್ತದೆ ಹಾಗೂ ಆಯಸ್ಸು ಕೂಡ ದೀರ್ಘಕಾಲವಿರುತ್ತದೆ ಎಂದು ರೈತರಿಗೆ ಅರಿವು ಮೂಡಿಸುವುದರ ಜೊತೆಗೆ, ಸ್ವತ: ತಾವು ಕೂಡ ತಮ್ಮ ಎಕೆರೆ ಜಮೀನಿನಲ್ಲಿ ಬೇಸಾಯವನ್ನು ಮಾಡಲು ಮುಂದಾದರು. ತಮ್ಮದೇ ಆದ “ಆರ್ಗಾನಿಕ್ ಮಂಡ್ಯ” ಸಂಸ್ಥೆಯ ಮೂಲಕ ರೈತರು ಬೆಳೆದ ಸಾವಯವ ಆಹಾರವನ್ನು ಮಾರಾಟಮಾಡಲಾಗುತ್ತಿದೆ.
ತಮ್ಮಸಂಸ್ಥೆಯ ಮೂಲಕ ಕೇವಲ ರೈತರಿಗೆ ಮಾತ್ರವಲ್ಲ,ಶಾಲಾ ವಿದ್ಯಾರ್ಥಿಗಳು, ಕಾಲೇಜು ಯುವಕ ಯುವತಿಯರಿಗೆ ಕೃಷಿಯ ಮಹತ್ವವನ್ನು ತಿಳಿಸುತ್ತಿದ್ದಾರೆ.ಹಾಗೂ ಐಟಿ ಬಿಟಿಯಂತಹ ಬಹುದೊಡ್ಡ ಕಂಪನಿಗಳಲ್ಲಿ ಕೆಲಸ ಮಾಡುವಂತಹ ನೌಕರರು ಕೂಡ ಮಧುಚಂದನ್ ಬಳಿ ಸಮಯ ಸಿಕ್ಕಾಗ ಬೇಸಾಯ ಮಾಡುತ್ತಾರೆ ಎನ್ನುವುದೇ ಹೆಮ್ಮೆಯ ಸಂಗತಿ. ಇಂದು “ಆರ್ಗಾನಿಕ್ ಮಂಡ್ಯ’150 ಕೋಟಿಗೂ ಹೆಚ್ಚು ಆದಾಯ ಗಳಿಸುತ್ತಿರುವ ಬಹುದೊಡ್ಡ ಸಂಸ್ಥೆಯಾಗಿದೆ.ಹಾಗೂ ರಾಜ್ಯದ ಬಹುತೇಕ ನಗರಗಳಲ್ಲಿ “ಆರ್ಗಾನಿಕ್ ಮಂಡ್ಯ ಸಂಸ್ಥೆ ಆರಂಭವಾಗಿ, ರಾಸಾಯನಿಕ ಮುಕ್ತ ಆಹಾರ ನಗರವಾಸಿಗಳಿಗೂ ಕೂಡ ತಲುಪುತ್ತಿದೆ